30/09/2025
ಇಪ್ಪತ್ತೈದು ವರ್ಷಗಳ ಕಾಲ ಯಶಸ್ವಿನಿ ಮಹಿಳಾ ಸಹಕಾರಿಯ ಉಪಾಧ್ಯಕ್ಷರಾಗಿದ್ದು ಈಗ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ವೈ ಎನ್ ರಂಗಮಣಿ ಇವರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮತ್ತು ರಾಮನಗರ ಸೌಹಾರ್ದ ಸಹಕಾರಿಗಳ ಒಕ್ಕೂಟ ಇವರು ನೀಡಿದ 2024-25 ನೇ ಸಾಲಿನ “ಸಹಕಾರ ಶಕ್ತಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶ್ರೀಮತಿ ವೈ ಎನ್ ರಂಗಮಣಿಯವರು ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಕಾಲ ಯಶಸ್ವಿನಿ ಮಹಿಳಾ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಸಮರ್ಥ ಕಾರ್ಯ ನಿರ್ವಹಣೆ ಮಾಡುತ್ತಿದ್ದು ನಂತರ ಸಕ್ರಿಯ ನಿರ್ದೇಶಕಾರಾಗಿ ಮುಂದುವರಿದಿದ್ದಾರೆ.
ಸಹಕಾರಿ ಆಡಳಿತಮಂಡಳಿ ಮತ್ತು ಸಾಲದ ಉಪಸಮಿತಿ ಇವುಗಳು ನಡೆಸುವ ಎಲ್ಲಾ ಸಭೆಗಳು, ವಾರ್ಷಿಕ ಸರ್ವ ಸದಸ್ಯರ ಸಭೆ ಇವುಗಳೇ ಅಲ್ಲದೇ ಸೊಸೈಟಿಯಲ್ಲಿ ನಡೆಯುವ ತರಬೇತಿ ಮತ್ತಿತರ ಕಾರ್ಯಕ್ರಮಗಳಿಗೆ ಇದುವರೆಗೆ ಒಮ್ಮೆಯೂ ಗೈರುಹಾಜರಾಗದೇ ಇರುವುದು ಇವರ ಹೆಗ್ಗಳಿಕೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕಾಲಕಾಲಕ್ಕೆ ನಡೆಸುವ ಆಡಳಿತ ಮಂಡಳಿ ನಿರ್ದೇಶಕರ ತರಬೇತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಯಶಸ್ವಿನಿ ಸಹಕಾರಿಯಲ್ಲಿ, ಸದಸ್ಯರ ಸೇರ್ಪಡೆ, ಠೇವಣಿ ಸಂಗ್ರಹ, ಸಾಮಾಜಿಕ ಕಾರ್ಯಕ್ರಮ, ಸದಸ್ಯರಿಗೆ ಸಾಲ ನೀಡಿಕೆ ಮತ್ತು ವಸೂಲಾತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ.
ಮೂಲತಃ ದಟ್ಟ ಮಲೆನಾಡಿನ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕಿನ ಪುರದಮನೆಯಲ್ಲಿ ಜನಿಸಿ, ಕೊಪ್ಪದಲ್ಲಿ ವಿದ್ಯಾಭ್ಯಾಸ ಮಾಡಿದರು. ಶ್ರೀ ಯಡಗೆರೆ ನಾಗರಾಜ್ ಅವರನ್ನು ಮದುವೆಯಾದ ನಂತರ ಪತಿಯ ಉದ್ಯೋಗದ ಪ್ರಯುಕ್ತ ಬಾಂಗ್ಲಾದೇಶದಲ್ಲಿ, ಅಲ್ಲದೇ ಭಾರತದ ಪಾಣಿಪಥ್, ಕಲ್ಕತ್ತ, ಒಡಿಸ್ಸಾದÀ ಕಾನ್ಯ ಮುಂತಾದ ವಿವಿಧ ಭಾಗಗಳಲ್ಲಿ ನೆಲೆಸಿ ಅಲ್ಲಿನ ಜನಜೀವನದಿಂದ ತಮ್ಮ ಅನುಭವವನ್ನು ವಿಸ್ತರಿಸಿಕೊಂಡವರು. ಪತಿ ಮಗ, ಸೊಸೆ, ಮೊಮ್ಮಕ್ಕಳೊಂದಿಗಿನ ನೆಮ್ಮದಿಯ ಸಂಸಾರ ಇವರದು.
ನಮ್ಮೆಲ್ಲರ ಹೆಮ್ಮೆಯ “ಸಹಕಾರ ಶಕ್ತಿ” ಶ್ರೀಮತಿ ರಂಗಮಣಿ ನಾಗರಾಗ್ ಅವರಿಗೆ ಅಭಿನಂದನೆಗಳು! 🌹🌹🌹